| ಶ್ರೀ ಗೋಳಿ ಸಿದ್ಧಿವಿನಾಯಕ ದೇವರ ಧ್ಯಾನ ಸ್ತೋತ್ರಮ್ |
ಶ್ರೀಮತ್ಸಿದ್ಧಿವಿನಾಯಕಂ ಗಣಪತಿಂ ಗೌರೀತನೂಸಂಭವಂ |
ಭಕ್ತಾsಭೀಷ್ಟ ಫಲಪ್ರದಂ ಸುರಗಣೈಃ ಸಂಸೇವಿತಂ ಶ್ರೀಕರಮ್ ||
ಬ್ರಹ್ಮಾವಿಷ್ಣು ಮಹೇಶ ಪೂಜಿತಪದಂ ಸಿದ್ಧಾರ್ಚಿತಂ ಪಾವನಂ |
ಶ್ರೀ ಗೋಳಿ ಸ್ಥಿರಮಂದಿರಂ ಭವಹರಂ ವಂದೇಮದೇsಭಾನನಮ್ ||
ಶ್ರೀ ಸಿದ್ಧಿವಿನಾಯಕ ದೇವರು, ಗೋಳಿ
ಶ್ರೀ ಸಿದ್ಧಿವಿನಾಯಕ ದೇವರು ನೆಲೆಸಿರುವ ಗೋಳಿ ಕ್ಷೇತ್ರವು ಪುರಾತನ ಪುಣ್ಯಸ್ಥಳ. ಇಲ್ಲಿಯ ಕ್ಷೇತ್ರ ಪುರಾಣಕ್ಕೆ ಯಾವುದೇ ಲಿಖಿತ ಆಧಾರಗಳಾಗಲೀ – ಶಾಸನ – ಸ್ಮಾರಕಗಳು ಲಭ್ಯವಿಲ್ಲದಿದ್ದರೂ; ತಲೆತಲಾಂತರದಿಂದ ಶ್ರೀ ಸಿದ್ಧಿವಿನಾಯಕ ದೇವರು ಗೋಳಿಯಲ್ಲಿ ನೆಲೆಸಿರುವ ಪರಿ ಹಿರಿಯರಿಂದ ಕಿರಿಯರಿಗೆ ಹರಿದುಬಂದಿದೆ. ಈ ಶ್ರವಣಾಧಾರಿತ ಕ್ಷೇತ್ರ ಪುರಾಣವು ವ್ಯಕ್ತಿಯಿಂದ ವ್ಯಕ್ತಿಗೆ ಕೊಂಚ ಭಿನ್ನವೆನಿಸಿದರೂ – ಮೂಲ ಸ್ಥಾಪಕ ವಂಶಜರ ಆಡುನುಡಿಯ ಸಾರಾಂಶ ಇಂತಿದೆ…
ಸುಮಾರು ಐದುನೂರು ವರ್ಷದ ಹಿಂದೆ ಸೋಂದಾ ಅರಸರ ಆಳ್ವಿಕೆಯ ಕಾಲ, ಕರೂರು ಸೀಮೆಯ ಮಾಂಡಲೀಕನ ಆಸ್ಥಾನದಲ್ಲಿ ಬಪ್ಪನಳ್ಳಿಯ ಗಣಪತಿ ಜೋಶಿಯವರು ರಾಜ ಪುರೋಹಿತರಾಗಿದ್ದರು. ಒಂದು ರಾತ್ರಿ ಗಣಪತಿ ಜೋಶಿಯವರ ಕನಸಿನಲ್ಲಿ ಕಾಣಸಿಕೊಂಡ ದೇವ ಗಣೇಶನು “ಗೋಳಿ ಮರದ ಕೆಳಗೆ ಇರುವ ನನ್ನ ವಿಗ್ರಹಕ್ಕೊಂದು ಆಲಯ ನಿರ್ಮಿಸು, ನಾನು ಈ ಕ್ಷೇತ್ರದ ಅಧಿದೇವತೆಯಾಗಿ ಸಕಲರ ಸಂಕಷ್ಟಗಳನ್ನು ನಿವಾರಿಸಿ, ಮನದಭಿಲಾಷೆಯಂತೆ ಕಾರ್ಯಸಿದ್ಧಿ ಮಾಡುತ್ತೇನೆಂದು” ಆದೇಶವಿತ್ತನು.
ರಾಜ ಪುರೋಹಿತರಾಗಿದ್ದರೂ ಬಡವರಾಗಿದ್ದ ಜೋಶಿಯವರಿಗೆ ದೇವಾಲಯ ನಿರ್ಮಿಸುವ ಆರ್ಥಿಕ ಬಲವಿರಲಿಲ್ಲ. “ಉಳ್ಳವರು ಶಿವಾಲಯವ ಮಾಡುವರಯ್ಯ, ನಾನೇನು ಮಾಡಲಿ ಬಡವನಯ್ಯ” ಎಂಬಂತೆ ದೈವವಾಣಿಯನ್ನು ಅಂತರಂಗದಲ್ಲಿ ಅಡಗಿಸಿಕೊಂಡು ಚಿಂತಾಕ್ರಾಂತರಾದರು.
ಕೆಲವು ದಿನಗಳ ನಂತರ ಮತ್ತೆ ಜೋಶಿಯವರಿಗೆ ಗಜಮುಖನ ಕನಸು; ಆಲಯ ಅಪೇಕ್ಷಿಸುತ್ತಿರುವ ಆದಿವಂತನಲ್ಲಿ ಜೋಶಿಯವರು ತನ್ನಆರ್ಥಿಕ ಅಬಲತೆಯ ಬಗ್ಗೆ ಅರುಹಿದರು. ಪರಿಹಾರ ಸೂಚಿಸಿದ ಸುಮುಖನು “ಪೂರ್ವ ದಿಕ್ಕಿಗೆ ಸ್ವಲ್ಪ ದೂರದಲ್ಲಿ ನಿಧಿಯಿದೆ, ಅದರಿಂದ ಆರು ಬೊಗಸೆ ನಾಣ್ಯ ಪಡೆದು ನನ್ನಆಲಯ ನಿರ್ಮಿಸು, ಸಕಲರಿಗೂ ಸನ್ಮಂಗಲವಾಗುತ್ತದೆ” ಎಂದು ಅಪ್ಪಣೆಯಿತ್ತನು.
ದೇವಾಲಯ ನಿರ್ಮಿಸಲು ಆರು ಬೊಗಸೆ ಸಾಕಾಗದು ಎಂದು ಯೋಚಿಸಿದ ಜೋಶಿಯವರು ಏಳನೇ ಬೊಗಸೆಗಾಗಿ ಕೈ ಹಾಕಿದರು, ಮರುಕ್ಷಣ ಮುಚ್ಚಳದಡಿಯಲ್ಲಿ ಸಿಲುಕಿ ಒಂದು ಬೆರಳು ಕತ್ತರಿಸಲ್ಪಟ್ಟಿತು. ಮುಂದೆ ತಲೆತಲಾಂತರದವರೆಗೂ ಜೋಶಿಯವರ ಕುಟುಂಬದವರು ಜನಿಸುವಾಗಲೇ ಆ ಒಂದು ಬೆರಳು-ಹೀನರಾಗಿ ಜನಿಸುತ್ತಿದ್ದುದು ಈ ಸತ್ಯಕ್ಕೊಂದು ನಿತ್ಯನಿರ್ದಶನ. ನಾಣ್ಯದೊರೆತ ಆ ಸ್ಥಳವು “ನಾಣ್ಯಝರಿ” ಎಂದು ಪ್ರಸಿದ್ಧವಾಗಿದ್ದು, ಕಾಲಾಂತರದಲ್ಲಿ “ನಾಮಾಂಝರಿ”ಯಾಗಿರುವ ಪುರಾತನ ಕುರುಹನ್ನು ಇಂದಿಗೂ ನೋಡಬಹುದಾಗಿದೆ.
ಪ್ರತಿದಿನ ವಿಗ್ರಹಕ್ಕಾಗಿ ಹುಡುಕಾಟ, ದಟ್ಟಡವಿಯಲ್ಲಿ ಗೋಳಿ ಮರವನ್ನು ಹುಡುಕುವುದೂ ಕಷ್ಟ. ಕೆಲವು ದಿನಗಳ ನಂತರ ಜ್ಯೋತಿಷಿಗಳೂ ಆದ ಜೋಶಿಯವರ ಬಳಿ ದನಕಾಯುವವನೊಬ್ಬ ಬಂದು ತನ್ನದೊಂದು ಹಸು ಹಾಲು ಕೊಡದೇ ನಿತ್ಯ ಅಡವಿಯಲ್ಲಿ ಗೋಳಿಮರದ ಕೆಳಗೆ ತಾನಾಗಿಯೇ ಹಾಲು ಸುರಿಸುತ್ತದೆ, ಇದಕ್ಕೆ ಪರಿಹಾರವೇನೆಂದು ಕೇಳಿದನು. ದೇವನೇ ದನಗಾಹಿಯ ರೂಪದಲ್ಲಿ ಬಂದಂತಾಯಿತು ಜೋಶಿಯವರಿಗೆ. ಕೂಡಲೇ ಅವನ ಜೊತೆಕಾಡಿಗೆ ಪಯಣಿಸಿದರು, ಮರದಡಿಯಲ್ಲಿ ಬಿದ್ದ ತರಗೆಲೆಗಳನ್ನು ಸರಿಸಿದಾಗ ಶ್ರೀ ಸಿದ್ಧಿವಿನಾಯಕ ದೇವರ ವಿಗ್ರಹದರ್ಶನ.
ಗೋಳಿ ಮರವಿರುವ ಕ್ಷೇತ್ರದಲ್ಲಿಯೇ ದೇವಾಲಯ ನಿರ್ಮಿಸಬೇಕೆಂದು ನಿರ್ಧಾರವಾಗಿ, ಸರ್ವ ಸಿದ್ಧತೆಮಾಡಿ ದೇವಾಲಯ ನಿರ್ಮಾಣವಾಯಿತು, ಸಿದ್ಧಿವಿನಾಯಕನನ್ನು ಪ್ರತಿಷ್ಠಾಪಿಸಿದರು. ಅಂದು ಗೋಳಿ ಮರವಿದ್ದ ಕ್ಷೇತ್ರವೇ ಇಂದು ಶ್ರೀ ಸಿದ್ಧಿವಿನಾಯಕ ದೇವರು ನೆಲೆಸಿರುವ ಶ್ರೀಕ್ಷೇತ್ರ
ಅಂದಿನಿಂದ ಶ್ರೀ ಸಿದ್ಧಿವಿನಾಯಕನು ಸೀಮೆಯ ಆಸ್ತಿಕರ ಆರಾಧ್ಯ ದೈವ, ನಾಡಿನ ಭಕ್ತರಿಗೆ ಕೇಳಿದ್ದು ನೀಡುವ ಶಕ್ತಿ ದೇವತೆ. ಶ್ರೀ ಸಿದ್ಧಿವಿನಾಯಕ ದೇವರನ್ನು ಪ್ರಾರ್ಥಿಸಿ ಪ್ರಾರಂಭಿಸಿದ ಕಾರ್ಯಗಳೆಲ್ಲವೂ ಫಲಪ್ರದವಾಗುತ್ತದೆ. ಕೈಮುಗಿದು ಕೈಗೊಂಡ ಕಾರ್ಯಗಳೆಲ್ಲ ಕೈಗೂಡುತ್ತದೆ. ಸಿದ್ಧಿಗಾಗಿ ಬೇಡಿದರೆ ಸಿದ್ಧಿಸುತ್ತಾನೆ. ಹರಕೆ ಹೊತ್ತವರನ್ನು ಹರಸುತ್ತಾನೆ. ಹಸಿರ ಬೆಳೆವ ರೈತರಿಗೆ ಉಸಿರಾಗುತ್ತಾನೆ.
“ಶ್ರೀ ಸಿದ್ಧಿವಿನಾಯಕ ಪ್ರಸೀದತು”