ಶ್ರೀ ಗೋಳಿ ಸ್ವರ್ಣಗೌರಿದೇವಿಯ ಧ್ಯಾನ ಸ್ತೋತ್ರಮ್
ಧ್ಯಾಯೇದ್ದೇವೀಂ ಸ್ವರ್ಣಗೌರೀಂ ನಾಗಾಭರಣಭೂಷಿತಾಮ್ |
ಚತುರ್ಭುಜಾಂ ಮಹಾಶಕ್ತಿಂ ಪಾಶಾಂಕುಶಧರಾಂ ಶಿವಾಮ್ ||
ಅಭಯಂ ವರದಂ ಚೈವ ಭಕ್ತಾsಭೀಷ್ಟಫಲಪ್ರದಾಮ್ |
ಸರ್ವಾಲಂಕಾರ ಸಂಯುಕ್ತಾಂ ಪದ್ಮಪಾದ ಪ್ರಲಂಬಿತಾಮ್ ||
ಶ್ರೀ ಸ್ವರ್ಣಗೌರಿ ದೇವಸ್ಥಾನ ಗೋಳಿ
ಶ್ರೀ ಸಿದ್ಧಿವಿನಾಯಕನು ನಿತ್ಯ ಸಾನ್ನಿಧ್ಯವಿತ್ತು ಭಕ್ತ ಜನರನ್ನು ಅನುಗ್ರಹಿಸುತ್ತಿರುವ ಶ್ರೀ ಗೋಳಿ ಕ್ಷೇತ್ರವು ಸ್ವರ್ಣವಲ್ಲೀ ಮಹಾಸಂಸ್ಥಾನದ ಕರೂರು ಸೀಮಾವ್ಯಾಪ್ತಿಯ ದೇವಾಲಯಗಳಲ್ಲಿ ಒಂದಾಗಿದ್ದು, ಸುಮಾರು ಏಳು ನೂರು ವರ್ಷಗಳಿಗೂ ಮಿಕ್ಕಿದ ಇತಿಹಾಸ ಇರುವುದು ಕಂಡುಬರುತ್ತದೆ. ಕಳೆದ 2007-08 ರಲ್ಲಿ ಶ್ರೀ ಸಿದ್ಧಿವಿನಾಯಕ ದೇವಾಲಯದಲ್ಲಿ ಹಾಗೂ ಗೋಳಿ ದೇವಸ್ಥಾನಕ್ಕೆ ಸಂಬಂಧಪಟ್ಟ 8 ಗ್ರಾಮಗಳಲ್ಲಿ ಹಲವಾರು ರೀತಿಯ ಕಷ್ಟ – ಕಾರ್ಪಣ್ಯಗಳು ಎದುರಾದ ಹಿನ್ನೆಲೆಯಲ್ಲಿ, ದೇವಸ್ಥಾನದ ಆಡಳಿತ ಸಮಿತಿಯವರು ಖ್ಯಾತ ಜ್ಯೋತಿಷಿಗಳಾದ ಮಂಜುಗುಣಿಯ ವೇ.ಮೂ. ಶ್ರೀ ಶ್ರೀನಿವಾಸ ಭಟ್ಟರಲ್ಲಿ ವಿಚಾರಿಸಿದಾಗ ಕೆಲ ತೊಡಕುಗಳು ಇರುವುದು ತಿಳಿದು ಬರುತ್ತದೆ. ಈ ಬಗ್ಗೆ ಮಂಗಳೂರು ಸಮೀಪದ ಮರಕಡದ ಶ್ರೀ ಶ್ರೀ ಶ್ರೀ ನರೇಂದ್ರನಾಥಯೋಗೀಶ್ವರೇಶ್ವರ ಸ್ವಾಮಿಗಳಲ್ಲಿ ಪರಾಮರ್ಶಿಸಿದಾಗ, ಈ ಬಗ್ಗೆ ಅಷ್ಠ ಮಂಗಲ ಪ್ರಶ್ನೆ ಮುಖಾಂತರ ಪರಿಹಾರ ಕಂಡುಕೊಳ್ಳುವುದು ಸೂಕ್ತವೆಂದು ಅವರು ಅಭಿಪ್ರಾಯವಿತ್ತರು.
ಮುಂದುವರೆದು ಕೇರಳದ ಪಾಲಕ್ಕಾಡಿನ ದೈವಜ್ಞರಾದ ಶ್ರೀ ವೆಂಕಟೇಶ ಭಟ್ಟರಲ್ಲಿ ಹಾಗೂ ಅವರ ಗುರುಗಳಾದ ಶ್ರೀ ವಿಶ್ವನಾಥ ಪಡಿಯಾರ ಅವರನ್ನು ಕರೆಯಿಸಿ ಶ್ರೀ ಸಿದ್ಧಿವಿನಾಯಕನ ಸನ್ನಿಧಾನದಲ್ಲಿ ಅಷ್ಠ ಮಂಗಲ ಪ್ರಶ್ನಾವಳಿಯನ್ನು ಕೇಳಿಸಲಾಯಿತು. ದೈವಜ್ಞರ ಪ್ರಶ್ನಾವಳಿಯಲ್ಲಿ ಕಂಡುಬಂದಂತೆ ಗೋಳಿ ದೇವಸ್ಥಾನದಲ್ಲಿ ಶ್ರೀ ಸಿದ್ಧಿವಿನಾಯಕ ದೇವರ ಸಾನ್ನಿಧ್ಯವಿರುವಂತೆ ಶ್ರೀ ದೇವಿಯ ಸಾನ್ನಿಧ್ಯವೂ ಇರುವುದೆಂದು ತಿಳಿದು ಬಂದಿತು. ಅಲ್ಲದೇ ಶ್ರೀ ದೇವಿಯ ನೂತನ ದೇವಾಲಯ ನಿರ್ಮಿಸಿ ಅಲ್ಲಿ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ, ಪೂಜಿಸುತ್ತಾ ಬಂದಲ್ಲಿ ಎಲ್ಲಾ ರೀತಿಯ ಕಷ್ಟಗಳ ನಿವಾರಣೆ ಆಗುವುದೆಂದು ತಿಳಿಸಿದರು.
ಅದರಂತೆ ವಿಶ್ವದ ಮಹಾನ್ ಆಧ್ಯಾತ್ಮ ಸಾಧಕರಾದ ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್’ನ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ರವಿಶಂಕರ ಗುರೂಜಿಯವರ ತಂದೆಯವರು ಗೋಳಿಯ ಸಮೀಪದ ಯಲಗೋಡಮನೆಯಲ್ಲಿರುವ ತಮ್ಮ ಆಶ್ರಮದಲ್ಲಿ ಪ್ರತಿಷ್ಠಾಪಿಸಿ ಪೂಜಿಸಲು ಶ್ರೀ ದೇವಿಯ ಮೂರ್ತಿಯನ್ನು ತಂದಿದ್ದರು. ಆದರೆ ವಯೋಸಹಜವಾಗಿ ಪೂಜ್ಯ ಶ್ರೀ ಶ್ರೀ ಶ್ರೀ ರವಿಶಂಕರ ಗುರೂಜಿ ಅವರ ತಂದೆಯವರು ಮುಕ್ತರಾದರು. ಹೀಗಿರುವಾಗ ಯಲಗೋಡಮನೆಯ ಆಶ್ರಮಕ್ಕೆ ಗುರೂಜಿಯವರು ಬಂದಾಗ, ಸತ್ಸಂಗ ಕಾರ್ಯಕ್ರಮ ನಿಮಿತ್ತ ಗೋಳಿ ದೇವಸ್ಥಾನಕ್ಕೆ ಆಗಮಿಸಿದರು. ಗೋಳಿಯ ಸುಂದರ ಪರಿಸರವನ್ನು ನೋಡಿ ಆಕರ್ಷಿತರಾಗಿ ಶ್ರೀ ದೇವಿಯ ಮೂರ್ತಿಯನ್ನು ಗೋಳಿಯಲ್ಲೇ ಸ್ಥಾಪಿಸಬಹುದೆಂದು ದೇವಸ್ಥಾನದ ಆಡಳಿತ ಸಮಿತಿಯವರಿಗೆ ತಿಳಿಸಲಾಗಿ ಸಮಿತಿಯವರು ಸಹರ್ಷದಿಂದ ಒಪ್ಪಿಗೆಯಿತ್ತರು.
ಕುಕ್ಕೆ ಸುಬ್ರಹ್ಮಣ್ಯದ ಖ್ಯಾತ ವಸ್ತು ಶಿಲ್ಪಿಗಳಾದ ಶ್ರೀ ಮಹೇಶ ಮುನಿಯಂಗಳ ಅವರ ವಾಸ್ತುಶಿಲ್ಪದ ನೀಲನಕ್ಷೆಯ ಪ್ರಕಾರವಾಗಿ; ಶ್ರೀ ಶ್ರೀ ಶ್ರೀ ರವಿಶಂಕರ ಗುರೂಜಿಯವರು ಸಂಕಲ್ಪಿಸಿದಂತೆ ಅವರದೇ ಮುತುವರ್ಜಿಯಲ್ಲಿ ಶ್ರೀ ದೇವಿಯ ದೇವಸ್ಥಾನ ನಿರ್ಮಾಣಗೊಂಡಿತು. ನೂತನ ದೇವಸ್ಥಾನ ಹಾಗೂ ಶ್ರೀ ದೇವಿಯ ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮ ಸ್ವಸ್ತಿ ಶ್ರೀ ಶಾಲಿವಾಹನ ಶಕೆಯ ದುರ್ಮುಖನಾಮ ಸಂವತ್ಸರದ ಚೈತ್ರಮಾಸ ಕೃಷ್ಣಪಕ್ಷ ನವಮಿ ಮಿತಿಯಂದು ದಿನಾಂಕ 01/05/2016 ರವಿವಾರ ಪರಮಪೂಜ್ಯ ಶ್ರೀ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ಸ್ವರ್ಣವಲ್ಲೀ ಮಹಾಸಂಸ್ಥಾನ ಹಾಗೂ ಶ್ರೀ ಶ್ರೀ ಶ್ರೀ ರವಿಶಂಕರ ಗುರೂಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ; ಪರಮ ಪೂಜ್ಯ ಶ್ರೀ ಶ್ರೀ ಶ್ರೀ ರಮಾನಂದ ಅವಧೂತ ಸ್ವಾಮಿಗಳು ಶ್ರೀಕ್ಷೇತ್ರ ದಿವಗಿ ರವರ ದಿವ್ಯ ಆಶೀರ್ವಾದದೊಂದಿಗೆ ನೆರವೇರಿತು. ಶ್ರೀ ದೇವಿಯು “ಸ್ವರ್ಣಗೌರಿ” ಎಂಬ ಹೆಸರಿನಲ್ಲಿ ಗೋಳಿಯಲ್ಲಿ ಪ್ರತಿಷ್ಠಾಪನೆಗೊಂಡು, ಭಕ್ತಾದಿಗಳನ್ನು ಹರಸುತ್ತಿದ್ದಾಳೆ.
“ಶ್ರೀ ಸ್ವರ್ಣಗೌರಿ ಪ್ರಸೀದತು”